Thursday, July 4, 2019

ಮೈಮರೆವು

ಅವಳನಗೆ ನೋಡುತ್ತ ಮೈಮರೆತೆ ನಾನು 
ಮನಸಿಗಾಯಿತು ಖುಷಿಯು ಕುಡಿದಷ್ಟು ಜೇನು 
ಅವಳ ಜೊತೆ ಜೀವನವು ನಡೆದೀತು ಸುಗಮ 
ಬದುಕು ಬಂಗಾರವು, ಬಾಳೆಲ್ಲ ಸರಿಗಮ 

Monday, October 29, 2018

ಕಣ್ಣೀರು

ಜಗತ್ತನ್ನು ಸೆಳೆಯಲು
ಸುಂದರ ಕಣ್ಣಿರಬೇಕು.

ಅಥವಾ ಹೆಂಗಸರ
ಕಣ್ಣೀರು ಬೇಕು.

ನೆಮ್ಮದಿ



ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೆಲಸ ಮಾಡುವ ಬಹಳಷ್ಟು ಜನರಿಗೆ, ಅದರಲ್ಲೂ ಸಾಫ್ಟ್‌ವೇರ್ ಕೆಲಸದವರಿಗೆ ಎಲ್ಲಾ  ಇದ್ದರೂ ಏನೋ ಇಲ್ಲದ ಭಾವ ಯಾವಾಗಲೂ. ಬೇಕಾದರೆ ಕೇಳಿ ನೋಡಿ, ಎಷ್ಟು ಜನ ಮನಃಪೂರ್ವಕವಾಗಿ ಖುಷಿಯಾಗಿದ್ದೇವೆ ಅಂತ ಹೇಳುತ್ತಾರೆ?
ಕೈ ತುಂಬಾ ಸಂಬಳ ಇರಬಹುದು, ಹಲವಾರು ಬಾರಿ ವಿದೇಶ ಪ್ರವಾಸ ಹೋಗಿರಬಹುದು, ಸೈಟು- ಮನೆ ಅಂತೆಲ್ಲ ಮಾಡಿಕೊಂಡಿರಬಹುದು. ಆದರೂ ಎಲ್ಲೋ ಏನೋ ಕೊರತೆಯಿದೆ ಎಂದೆನಿಸುವುದು ಬಹುತೇಕರಿಗೆ ಸಾಮಾನ್ಯ. ಓದು ಮುಗಿದು ಈಗಷ್ಟೇ ಕೆಲಸಕ್ಕೆ ಸೇರಿದವರಿಗೆ ಅನುಭವ ಹೀಗೆ ಇಲ್ಲದಿರಬಹುದು, ಆದರೆ ೩-೪ ವರ್ಷ ಕಳೆಯುತ್ತಾ ಹೋದಂತೆ ಏನೋ ಮಿಸ್ಸಿಂಗ್ ಎನ್ನುವ ಭಾವ ಶುರುವಾಗುತ್ತದೆ. 

ವಾರಾಂತ್ಯ ಬಂದರೆ ಸಾಕು, ನಗರದಿಂದ ಹೊರಗೆ ಓಡುವವರ ಸಂಖ್ಯೆ ದೊಡ್ಡದಿದೆ, ಅದಕ್ಕೆ ಬೆಂಗಳೂರಿನಿಂದ ಪರವೂರುಗಳಿಗೆ ಹೋಗುವ ಹೆಚ್ಚಿನ ಎಲ್ಲ ಬಸ್ಸುಗಳು ವಾರಾಂತ್ಯದಲ್ಲಿ ತುಂಬಿರುತ್ತವೆ! ಸುತ್ತಮುತ್ತಲಿನ, ಹತ್ತಿರದ ಎಲ್ಲಾ ಪ್ರೇಕ್ಷಣೀಯ ಸ್ಥಳಗಳು ಜನರಿಂದ ತುಂಬಿ ತುಳುಕುತ್ತವೆ! ದಿನನಿತ್ಯದ ಜಂಜಾಟದಿಂದ ಮುಕ್ತವಾಗಿ ಎಲ್ಲಾದರೂ ದೂರ ಹೋಗುವ ಆಸೆ ಎಲ್ಲರಿಗೆ. ಯಾಂತ್ರಿಕ ಎನಿಸುವ ಬದುಕಿನಿಂದ ಸ್ವಲ್ಪವಾದರೂ ಭಿನ್ನವಾಗಿ ಸಮಯ ಕಳೆಯಲು ಎಲ್ಲರೂ ಬಯಸುತ್ತಾರೆ. 

ಕಚೇರಿಯಲ್ಲಿ ಕೆಲಸದ ವೇಳೆಯಲ್ಲಿ ಸದಾ ಒಂದಿಲ್ಲ ಒಂದು ರೀತಿಯ ಒತ್ತಡ ಸಾಮಾನ್ಯ. ಹಾಗಾಗಿ ಸಂಜೆಯಾಗುವಷ್ಟರಲ್ಲಿ ಮನಸ್ಸು ಪೂರ್ತಿಯಾಗಿ ನೆಮ್ಮದಿ ಕಳೆದುಕೊಂಡು ಖಾಲಿಯಾಗಿರುತ್ತದೆ. ಮತ್ತೆ ಸಾಕು-ಸಾಕೆನಿಸುವ ಟ್ರಾಫಿಕ್ ದಾಟಿ ಮನೆ ತಲುಪುವಷ್ಟರಲ್ಲಿ ಇದ್ದ ಅಲ್ಪ-ಸ್ವಲ್ಪ ಸಹನೆಯೂ ಹೋಗಿರುತ್ತದೆ. ಎದುರಿಗೆ ಸಿಕ್ಕಿದ ಗಂಡ/ಹೆಂಡತಿ, ಮಕ್ಕಳ ಮೇಲೆ ರೇಗುವುದು ಸಾಮಾನ್ಯ. 

ಬಹುಷಃ ಇದು ಹೆಚ್ಚಿನವರ ಕಥೆಯಾಗಿರಬಹುದು. ದುಡ್ಡು ಕೊಟ್ಟು ನೆಮ್ಮದಿಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲದ ಕಾರಣ ಇದಕ್ಕೆ ಬೇರೆಯೇ ಏನಾದರೂ ಪರಿಹಾರ ಹುಡುಕಬೇಕು. ನಮ್ಮ ಈ ಒತ್ತಡದ ಜೀವನ ಆರಂಭವಾಗುವ ಮೊದಲು ಬದುಕು ಹೇಗಿತ್ತು ಎಂದು ನೋಡಿದರೆ ಸ್ವಲ್ಪ ಮಟ್ಟಿಗೆ ಪರಿಹಾರ ಸಿಗಬಹುದೇನೋ. ಇಂಟರ್‌ನೆಟ್ ಇಲ್ಲದ ಕಾಲವನ್ನು ಸ್ವಲ್ಪ ಉಹಿಸಿಕೊಳ್ಳಿ. ಹೇಗೆಲ್ಲಾ ನಾವು ಸಮಯ ಕಳೆಯುತ್ತಿದ್ದೆವು, ನಮ್ಮೆಲ್ಲರಿಗೂ ಎಷ್ಟು ಸಮಯ ದೊರೆಯುತ್ತಿತ್ತು ಯೋಚಿಸಿ ನೋಡಿ. ನಮ್ಮ ಆಸೆಗಳೇನಿದ್ದವು, ಜೀವನ ಶೈಲಿ ಹೇಗಿತ್ತು, ಆಹಾರ ಪಧ್ಧತಿ ಏನಿತ್ತು ಹೀಗೆ ಹಲವು ವಿಷಯಗಳಲ್ಲಿ ನಾವು ಬದಲಾಗಿದ್ದೇವೆ. ಅದಕ್ಕೆ ತಕ್ಕಂತೆ ನಮ್ಮ ನೆಮ್ಮದಿಯೂ ದೂರವಾಗಿದೆ!

ನಮಗಿದ್ದ ಹಲವಾರು ಒಳ್ಳೆಯ ಹವ್ಯಾಸಗಳು ಈಗ ದೂರವಾಗಿವೆ. ಹಣ ಗಳಿಸುವ ಅಥವಾ ಮತ್ಯಾವುದೋ ಕಾರಣಕ್ಕಾಗಿ ನಮಗೀಗ ಯಾವುದಕ್ಕೂ ಸಮಯವಿಲ್ಲ, ಕೊನೆಗೆ ಊಟ ತಿಂಡಿಗೂ ಸಹ! ಬೇಕಿದ್ದರೆ ನೋಡಿ, ಸಾಮಾನ್ಯವಾಗಿ ಎಲ್ಲ 'ದರ್ಶಿನಿ' ಹೋಟೆಲುಗಳಲ್ಲಿ ಕುಳಿತು ಊಟ ಮಾಡಲು ಜಾಗವಿಲ್ಲ! ಸಾಂಪ್ರದಾಯಿಕ ತಿಂಡಿ-ತಿನಸುಗಳಿಗಿಂತ, ಫಾಸ್ಟ್ ಫುಡ್ಗಳ ಭರಾಟೆ ಎಲ್ಲೆಲ್ಲೂ.

ಮನುಷ್ಯನ ನೆಮ್ಮದಿ ಯಾವುದೇ ಒಂದು ವಸ್ತು, ವಿಷಯದ ಮೇಲೆ ನಿಂತಿಲ್ಲ. ಅದು ಹಲವಾರು ವಿಷಯಗಳ ಸಂಕೀರ್ಣ ಸ್ಥಿತಿ. ಪ್ರಸ್ತುತ ನಮಗೆ ನೆಮ್ಮದಿ ಬೇಕಿದ್ದರೆ ಅದಕ್ಕೆ ಯಾವುದೇ ಸಿದ್ಧ ಸೂತ್ರ ಇಲ್ಲ. ಅದು ಅವರವರ ಇಷ್ಟ, ಆಸಕ್ತಿ, ಜೀವನಶೈಲಿಗಳ ಮೇಲೆ ಅವಲಂಬಿತವಾಗಿದೆ. ಸಮಾಧಾನದಲ್ಲಿ ಕುಳಿತು ನಾವೇ ಪರಿಹಾರ ಹುಡುಕಬೇಕಿದೆ. ಅಂತಹ ನೆಮ್ಮದಿ ಎಲ್ಲರಿಗೂ ಸಿಗಲಿ ಎಂಬುದೇ ನನ್ನ ಆಶಯ.

Sunday, July 10, 2016

ದೇಶ ಮೊದಲು

ಮೋದಿ ಇರಲಿ ಬಿಜೆಪಿ ಇರಲಿ,
ಯಾರು ಮಾಡಿದರೇನು ಒಳ್ಳೆಯ ಕೆಲಸ?
ಇದು ನಮ್ಮ ದೇಶ, ಜನರು ನಮ್ಮವರೇ,
ಯೋಚಿಸಿ ನೋಡಿ ಒಂದು ನಿಮಿಷ. 

Thursday, August 8, 2013

ಹನಿಗಳು

ಮಳೆಗಾಗಿ ಕಾದಿರುವ
ಇಳೆಯನ್ನು ಕಂಡಾಗ 
ಒಳಮನಸಿಗೇಕೊ ನೋವು  
*******************
ಗಡಿ ಕಾವ ಸೈನಿಕನು 
ನಾಡ ರಕ್ಷಣೆಗೆಂದು 
ಮಡಿದಾಗ ಮನ ಮಿಡಿಯಿತು. 
*******************

Friday, July 26, 2013

ಶುಭಾಷಯ

ನಮ್ಮ ಸ್ಕಂದ ಭುವಿಗೆ ಬಂದು 
ವರ್ಷವಾಯಿತು 
ನಮ್ಮ ಮನೆಗೂ, ಮನಕೂ ಬಹಳ 
ಹರ್ಷವಾಯಿತು. 

ಪುಟ್ಟ ಪುಟ್ಟ ಹೆಜ್ಜೆ ಹಾಕಿ 
ಮನೆಯ ತುಂಬಾ ನಡೆಯುವ 
ತೊದಲು ಭಾಷೆಯಿಂದ ನಮ್ಮ 
ಮನವ ಮೋಡಿ ಮಾಡುವ. 

ನನ್ನ ಮೇಲೆ ಕುಳಿತು ತಾನು
ಆಟವಾಡುವ.
ಏನು ಬೇಕೋ ಕೇಳಿ ಪಡೆದು
ಖುಷಿಯ ಪಡೆಯುವ.

ಮುಗ್ಧ ನಗುವ ಬೀರಿ ನಮ್ಮ
ದುಗುಡ ಕಳೆಯುವ
ತುಂಟತನದಿ ಆಟವಾಡಿ
ನಕ್ಕು ನಲಿಯುವ.

Saturday, November 17, 2012

ಇಬ್ಬರಿಂದ ಮೂವರು ......

ಇಬ್ಬರಿದ್ದ ನಾವು ಮೂವರಾಗಿ ನೂರು ದಿನ ಕಳೆದಿದೆ. ಮೊದಲಿನ ದಿನಗಳಿಗೂ ಈಗಿನ ದಿನಗಳಿಗೂ ಬಹಳ ವ್ಯತ್ಯಾಸ ಕಾಣುತ್ತಿದೆ!

ಮೊದಲಾದರೆ ನಮ್ಮ ಇಷ್ಟದ ಹಾಗೆ ಊಟ- ತಿಂಡಿ, ಹರಟೆ, ತಿರುಗಾಟ. ಈಗ ಎಲ್ಲವೂ ಬದಲಾಗಿದೆ. ಟಿವಿ,ಇಂಟರ್ನೆಟ್ ನೋಡದ ದಿನಗಳೇ ಹೆಚ್ಚಾಗುತ್ತಿವೆ. ಮೊದಲಾದರೆ ಹೆಂಡತಿ ಹೇಳಿದರೂ ಕೇಳದೆ ಪೇಪರ್ ಓದುತ್ತಿದ್ದೆ. ಈಗ ಮಗರಾಯ ಬಂದ ಮೇಲೆ ಎಲ್ಲಾ ಬಂದ್.
ನಮ್ಮೊಳಗೇ ಜಗಳವಾಡಲು ಬೇಕಾದಷ್ಟು ಸಮಯವಿತ್ತು.ಈಗ ಮಗನ ಜೊತೆ ಕಾಲ ಕಳೆಯುವುದೇ ಕೆಲಸ.

ಯಾವತ್ತೂ ಹಾಡದ ನಾನೂ ಈಗ ಹಾಡಲು ಕಲಿತಿದ್ದೇನೆ! ಕಥೆ ಹೇಳಲು ಬಾರದ ನಾನೂ ಈಗ ಕಥೆ ಹೇಳಲು ಕಲಿಯುತ್ತಿದ್ದೇನೆ. ಮಗ ಮಾತು ಕಲಿತ ಮೇಲೆ ಕೇಳಬಹುದಾದ ಪ್ರಶ್ನೆಗಳಿಗೆ ಉತ್ತರಿಸಲು ಯಾವ ಯಾವ ವೆಬ್ ಸೈಟ್ ನೋಡಬೇಕು ಅಂತ ಯೋಚಿಸುತ್ತಿದ್ದೇನೆ. ಆನ್ ಲೈನ್ ಸಿಗಬಹುದಾದ ಪುಸ್ತಕಗಳನ್ನು ಗಮನಿಸುತ್ತಿದ್ದೇನೆ.

ಒಟ್ಟಾರೆ ಜೀವನ ಶೈಲಿಯೇ ಬದಲಾಗುತ್ತಿದೆ ಅದೇ ಹಳೆಯ ಸ್ಟೈಲ್ ಬೇಜಾರಾಗುತ್ತಿದೆ ಅಂತ  ಅನಿಸುವ ಸಮಯದಲ್ಲೇ ಮಗ ಬಂದಿದ್ದಾನೆ. ಹೊಸತನದ ಹುಡುಕಾಟಕ್ಕೆ ನಾಂದಿ ಹಾಡಿಸಿದ  'ಸ್ಕಂದ'ನಿಗೆ ನಾನು ಆಭಾರಿ.

ಈ ಎಲ್ಲದರ ನಡುವೆ ಹೆಂಡತಿಯದ್ದು ಮಾತ್ರ ಕಂಪ್ಲೇಂಟ್: 'ನನಗೆ ಸಮಯ ಕಡಿಮೆ ಕೊಡುತ್ತಿದ್ದಿಯ' ಅಂತ. ಇದಕ್ಕೆ ಉತ್ತರ ಸದ್ಯಕ್ಕಿಲ್ಲ!